ಸಂಸ :-
	1898-1939. ಪ್ರತಿಭಾವಂತ ನಾಟಕಕಾರ. ಸಂಸ ಇವರ ಕಾವ್ಯನಾಮ. ಎ.ಎಸ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಇವರ ಹೆಸರು.  ಮೈಸೂರು ಜಿಲ್ಲೆ ಯಳಂದೂರು ತಾಲ್ಲೂಕಿನ ಅಗರದ ಸುಸಂಸ್ಕøತ ಕುಟುಂಬದಲ್ಲಿ ಹುಟ್ಟಿದ ಇವರು ಮೈಸೂರಿನಲ್ಲಿ ಇಂಗ್ಲಿಷ್, ಸಂಸ್ಕøತ ಹಾಗೂ ಕನ್ನಡ ಭಾಷೆಗಳಲ್ಲಿ ಶಿಕ್ಷಣ ಪಡೆದು ಹತ್ತಾರು ವರ್ಷ ಕಾಲ ಮೈಸೂರು, ಮಂಗಳೂರು ಮುಂತಾದ ಸ್ಥಳಗಳಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡಿದರು. ಹಲವು ಕಾಲ ಭಾರತದ ನಾನಾ ಪ್ರದೇಶಗಳಲ್ಲಿ ಸಂಚಾರ ಮಾಡಿದ ಇವರು 1936ರ ವೇಳೆಗೆ ಮೈಸೂರಿಗೆ ಹಿಂದಿರುಗಿದರು.  

	ಪ್ರತಿಭಾವಂತರಾಗಿದ್ದ ಸಂಸರು ದೊಡ್ಡಪ್ರಮಾಣದಲ್ಲಿ ಸಾಹಿತ್ಯಸೃಷ್ಟಿ ಮಾಡಿದರು. ಆದರೆ ಇವರ ಹೆಸರಿನಲ್ಲಿ ಈಗ ಉಳಿದಿರುವುದು ಕೆಲವು ಕಥೆ, ಕವನಗಳು ಮತ್ತು ಆರು ನಾಟಕಗಳು ಮಾತ್ರ. ಕೌಶಲ (1914) ಎಂಬ ಕಥೆ ಎ. ಎಸ್. ಸ್ವಾಮಿ ಎಂಬ ಹೆಸರಿನಲ್ಲೂ ಶ್ರೀಮಂತೋ ದ್ಯಾನ ವರ್ಣನಂ (1918) ಎಂಬ ಕಾವ್ಯ ವೆಂಕಟಾದ್ರಿ ಪಂಡಿತ ಎಂಬ ಹೆಸರಿನಲ್ಲೂ ಸರ್ ಎಂ. ವಿಶ್ವೇಶ್ವರಯ್ಯನವ ರನ್ನು ಕುರಿತ ಪದ್ಯಮಾಲಿಕೆ (1921) ಸ್ವಾಮಿ ಎಂಬ ಹೆಸರಿನಲ್ಲೂ ಪ್ರಕಟವಾಗಿವೆ. ಕನ್ನಡದಲ್ಲಿ ಐತಿಹಾಸಿಕ ನಾಟಕವೆಂದು ಸ್ಥೂಲವಾಗಿ ಗುರುತಿಸಬಹುದಾದ ಕೃತಿಗಳನ್ನು ಬರೆದವ ರಲ್ಲಿ ಸಂಸರೇ ಮೊದಲಿಗರು. ಇವರು ಮೈಸೂರು ಒಡೆಯರ ಇತಿಹಾಸದ ಆಧಾರದ ಮೇಲೆ ರಚಿಸಿದ್ದರೆನ್ನಲಾದ 23 ನಾಟಕಗಳಲ್ಲಿ ಈಗ ಸುಗುಣ ಗಂಭೀರ, ವಿಗಡ ವಿಕ್ರಮರಾಯ, ಬೆಟ್ಟದ ಅರಸು, ಬಿರುದೆಂತೆಂಬರ ಗಂಡ, ಮಂತ್ರಶಕ್ತಿ ಮತ್ತು ವಿಜಯನಾರಸಿಂಹ ಎಂಬ 6 ನಾಟಕಗಳು ಮಾತ್ರ ಉಳಿದುಕೊಂಡಿವೆ. ಬಿರುದೆಂತೆಂಬರ ಗಂಡ ಅಚ್ಚುಕಟ್ಟಾಗಿ ರಚಿಸಿದ ಸ್ವಾರಸ್ಯವಾದ ಏಕಾಂಕ ನಾಟಕ. ಮೈಸೂರಿನ ಸಾಮಾನ್ಯ ವ್ಯಾಪಾರಿಯೊಬ್ಬ ಇಮ್ಮಡಿ ತಿಮ್ಮರಾಜ ಒಡೆಯರಿಗೆ ಬಿರುದೆಂತೆಂಬರಗಂಡ ಎಂಬ ಬಿರುದನ್ನು ಸಾಧಿಸಿಕೊಟ್ಟು ತನ್ನ ಉಜ್ಜ್ವಲ ರಾಜಭಕ್ತಿ ಪ್ರದರ್ಶಿಸಿದ ಹಳೆಯ ಕಥೆ ಅದರಲ್ಲಿ ನವಿರಾಗಿ ಅರಳಿದೆ. ಸುಗುಣಗಂಭೀರ ನಾಲ್ವಡಿ ಚೋಳ ಚಾಮರಾಜ ಒಡೆಯರ ಕಾಲದ ಕಥೆ. ತೊರೆಮಾವಿನ ಹಳ್ಳಿಯ ದೇಮಟಿ ವೆಂಕಟಾದ್ರಿ ನಾಯಕನ ಸೈನ್ಯವನ್ನು ಮೈಸೂರು ಅರಸರು ಸೋಲಿಸಿ ಸುಗುಣಗಂಭೀರನೆಂಬ ಬಿರುದನ್ನು ಸಂಪಾದಿಸಿದ ಘಟನೆ ಇದರಲ್ಲಿ ಬರುತ್ತದೆ. ಮುಖ್ಯ ಕಥೆಯೊಂದಿಗೆ ದುರಂತ ಪ್ರೇಮದ ಕಥೆಯೂ ಸೇರಿ ನಾಟಕ ಸಂಕೀರ್ಣ ಸ್ವರೂಪ ಪಡೆದಿದೆ. ಸಂಸರು ಉಳಿದ ನಾಟಕಗಳಲ್ಲಿ ತಮ್ಮ ಆರಾಧ್ಯಮೂರ್ತಿ ರಣಧೀರ ಕಂಠೀರವ ನರಸರಾಜರ ಜೀವನ ಚರಿತ್ರೆಯ ಅಂಶಗಳನ್ನೇ ಆಧಾರವಾಗಿಟ್ಟು ಕೊಂಡಿದ್ದಾರೆ.

	ಸಂಸರ ನಾಟಕಗಳಲ್ಲಿ ಅರಮನೆಯ ಕೋಲಾಹಲಗಳು, ಕುಟಿಲ ತಂತ್ರಗಳ ಸಂಚು-ಹೊಂಚುಗಳು, ನೀಚ ಕಾರಸ್ಥಾನಗಳು ವಸ್ತುವಾಗಿ ಬಂದಿರುವುದರಿಂದ ಕ್ರಿಯೆಯಲ್ಲೆಲ್ಲ ಸಹಜವಾಗಿಯೇ ವೈವಿಧ್ಯ ಸ್ವಾರಸ್ಯ ಗಳಿವೆ. ನಾಟಕದ ಕ್ರಿಯೆ ಒಂದು ಘಟನೆಯಿಂದ ಇನ್ನೊಂದಕ್ಕೆ ಮಿಂಚಿನಂತೆ ಚಲಿಸುವುದರಿಂದ ಅಲ್ಲಿಯ ವಾತಾವರಣ ಜೀವಂತವಾಗಿದೆ. ಸಂಸರು ಹಳೆಯ ಸಂಪ್ರದಾಯಕ್ಕೆ ಸೇರಿದ ಪಂಡಿತರು. ಆದ್ದರಿಂದ ಇವರು ತಮ್ಮ ನಾಟಕಗಳಲ್ಲಿ ವೃತ್ತ ರೂಪದ ನಾಂದಿ, ಭರತವಾಕ್ಯಗಳನ್ನೂ ಅಲ್ಲಲ್ಲಿ ಕಂದಪದ್ಯಗಳನ್ನೂ ಸೇರಿಸಿದ್ದಾರೆ. ಹಳೆಯ ಕಾಲದ ಗಂಭೀರ ವಾತಾವರಣ ಸೃಷ್ಟಿಸಲು ಪೆಡಸಾದ ಪ್ರೌಢ ನಡುಗನ್ನಡ ಶೈಲಿಯನ್ನು ನಾಟಕ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. ಭವ್ಯ ಐತಿಹಾಸಿಕ ಸನ್ನಿವೇಶ ಗಳನ್ನು ಚಿತ್ರಿಸುವಲ್ಲಿ ಉಜ್ಜ್ವಲ ದೃಶ್ಯಾವಳಿಗಳನ್ನು ಜೋಡಿಸುವುದರಲ್ಲಿ ಇವರ ಗಡಸು ಶೈಲಿ ಹೆಚ್ಚಿನ ಪರಿಣಾಮ ಸಾಧಿಸುತ್ತದೆ. ರಂಗಭೂಮಿಯ ದೃಷ್ಟಿಯಿಂದಲೂ ಇವರ ನಾಟಕಗಳು ಯಶಸ್ವಿಯಾಗಿವೆ.

	ಕಾರಣಾಂತರಗಳಿಂದ ವ್ಯಗ್ರಮಾನಸಿಕ ವ್ಯಾಧಿಗೆ ತುತ್ತಾಗಿದ್ದ ಇವರು 1939 ಫೆಬ್ರವರಿ 14ರಂದು ಆತ್ಮಹತ್ಯೆ ಮಾಡಿಕೊಂಡರು. 
								
		(ಎಚ್.ಕೆ.ಆರ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ